ಆರಂಭ್ ಸುದ್ದಿ ಕನ್ನಡ

ರಾಜ್ಯದ ಗ್ರಾಮ ಪಂಚಾಯತಿ ಆಡಿಟ್‌ ಆಕ್ಷೇಪಣೆಗಳ ತೀರುವಳಿಗಾಗಿವಿಶೇಷ  ಅಭಿಯಾನ ಇತ್ಯರ್ಥವಾಗಬೇಕಾದ 1505 ಕೋಟಿ ಮೊತ್ತದ 56551 ಕಂಡಿಕೆಗಳು: ಪ್ರಿಯಾಂಕ್‌ ಖರ್ಗೆ

ಬೆಂಗಳೂರು 25/06/25 ಆರಂಭ್ ಸುದ್ದಿ ಕನ್ನಡ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳು ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ 100 ದಿನಗಳ ಗ್ರಾಮ ಪಂಚಾಯತಿ ಲೆಕ್ಕಪರಿಶೋಧನ ಅಭಿಯಾನ ಆರಂಭಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. 

2014-15ನೇ ಸಾಲಿನ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯ ಆಡಿಟ್ ಕಂಡಿಕೆಗಳ ಕುರಿತು ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್ ಸಂಸ್ಥೆಗಳ ಸಮಿತಿಯು ತೀವ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗೆ ನಿಯಮಾನುಸಾರ ಕ್ರಮ ಜರುಗಿಸಲು 100 ದಿನಗಳ ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನಾ ಅಭಿಯಾನವನ್ನು ಜೂನ್ 10ರಿಂದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ವಿಧಾನ ಸಭೆ ಹಾಗೂ ಪರಿಷತ್ ಸಂಬಂಧಿಸಿದ ಸಭೆಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಬಾಕಿ ಇರುವ ಲೆಕ್ಕ ಪರಿಶೋಧನೆ ಕಂಡಿಕೆಗಳು ತೀರುವಳಿಯಾಗದಿರುವ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಉಲ್ಲೇಖಿತ ರಾಜ್ಯ ಲೆಕ್ಕಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಆರ್ಥಿಕ ವರ್ಷ 2022-23 ರ ಅಂತ್ಯಕ್ಕೆ 1505.86 ಕೋಟಿ ರೂ. ಮೊತ್ತದ 56551 ಕಂಡಿಕೆಗಳು ತೀರುವಳಿಯಾಗಬೇಕಿರುವ ಕಾರಣದಿಂದಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. 

ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಿರುವ ಸಚಿವರು ಈ ಅಭಿಯಾನದಡಿ ಎಲ್ಲಾ ಜಿಲ್ಲೆಗಳ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಆರ್ಥಿಕ ವರ್ಷ 2023-24ರ ಅಂತ್ಯದ ವರೆಗೆ ಬಾಕಿ ಇರುವ ಲೆಕ್ಕ ಪರಿಶೋಧನಾ ಕಂಡಿಕೆಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸಲು ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಡ್ ಹಾಕ್ ಸಮಿತಿಯ ಸಭೆಗಳನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಹಾಗೂ ಅವಶ್ಯಕತೆ ಇದ್ದಲ್ಲಿ ವಾರಕ್ಕೊಮ್ಮೆ ನಡೆಸಲು ಸಲಹೆ ಮಾಡಿದ್ದಾರೆ. ಸಭೆಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಂಡಿಕೆವಾರು ವಿಷಯಗಳನ್ನು ತೆಗೆದುಕೊಂಡು ನಿಯಮಾನುಸಾರ ಇತ್ಯರ್ಥಗೊಳಿಸಬೇಕು, ಗ್ರಾಮ ಪಂಚಾಯತಿಗಳು ಸಮರ್ಪಕ ಉತ್ತರವನ್ನು ದಾಖಲಾತಿಗಳೊಂದಿಗೆ ಸಲ್ಲಿಸದೆ ಇದ್ದಲ್ಲಿ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. 

100 ದಿನಗಳೊಳಗಾಗಿ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ ಕೈಗೊಂಡ ಕ್ರಮದ ವಿವರಗಳನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗಳು ಸರ್ಕಾರಕ್ಕೆ ಸಲ್ಲಿಸಬೇಕು, ಅಭಿಯಾನ ನಿರ್ವಹಿಸಲು ತಪ್ಪಿದಲ್ಲಿ ಹಾಗೂ ವಸೂಲಾತಿಗೆ ಬಾಕಿ ಇರುವ ಪ್ರಕರಣಗಳ ತೀರುವಳಿಗೊಳಿಸಿದ ಶೇಕಡವಾರು ಅಂಕಿ ಅಂಶಗಳನ್ನು ಪರಿಶೀಲಿಸಿ ಪ್ರಗತಿ ಸಾಧಿಸದ ಜಿಲ್ಲೆಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು, ಅಭಿಯಾನದಲ್ಲಿ ತೀರುವಳಿಗೂಳ್ಳುವ ಕಂಡಿಕೆಗಳ ವಿವರಗಳನ್ನು ತಾವು ಪ್ರತಿ ತಿಂಗಳು ವಿಮರ್ಶಗೆ ಒಳಪಡಿಸುವದಾಗಿ ಸಚಿವರು ತಿಳಿಸಿದ್ದಾರೆ. ಅಭಿಯಾನ 16ನೇ ಜೂನ್ 2025ರಿಂದ ಜಾರಿಗೆ ಬಂದಿದ್ದು, 23ನೇ ಸೆಪ್ಟೆಂಬರ್ 2025 ರವರೆಗೆ ನಡೆಯಲಿದೆ....ಆರಂಭ್ ಸುದ್ದಿ ಕನ್ನಡ...

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments