ಆರಂಭ್ ಸುದ್ದಿ ಕನ್ನಡ

ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ :ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ!!!


          
ಚಾಮರಾಜನಗರ, ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ಪ್ರಗತಿ ಸ್ಪಷ್ಟವಾಗಿದೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ, ಪ್ರಯತ್ನಗಳನ್ನು ವೇಗ ಗೊಳಿಸೋಣ’ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಲ್ಲಿರುವ ಮಕ್ಕಳು ಹೆಚ್ಚಾಗಿ ಬಾಲಕಾರ್ಮಿಕ ಪದ್ದತಿಗೆ ತುತ್ತಾಗುತ್ತಿದ್ದು, ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಗೆ ದೂಡದೇ ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ನೀಡುವಂತೆ ಪೋಷಕರಿಗೆ ಅರಿವು ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ಕೆಲಸ ಮಾಡುವ ಮಕ್ಕಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದರ ಮೂಲಕ ಕಾರ್ಮಿಕ ಇಲಾಖೆಯು ಸಮಾಜಮುಖಿ ಕೆಲಸ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.

ಮಕ್ಕಳು ಈ ದೇಶದ ಆಸ್ತಿ. ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ಇರುವುದರಿಂದ ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಯಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಪ್ರಮುಖವಾಗಿದೆ. ಬಾಲಕಾರ್ಮಿಕ ಪದ್ದತಿ ವಿರುದ್ಧ ಹೋರಾಟ ನಿರಂತರವಾಗಿರಬೇಕು. ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯ ಪ್ರತಿನಿದಿನವು ನಡೆಯಬೇಕೆಂದು ಎಂದು ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಕೆಲ ಪೋಷಕರು ಬಡತನ, ಇತರೆ ನೆಪವೊಡ್ಡಿ ಮಕ್ಕಳನ್ನು ದುಡಿಮೆಗೆ ದೂಡುತ್ತಿರುವುದರಿಂದ ಮಕ್ಕಳ ಭವಿಷ್ಯದ ಜೊತೆಗೆ ದೇಶದ ಬೆಳವಣಿಗೆ ಕುಂಠಿತವಾಗಲಿದೆ. ಆರ್ಥಿಕ ಉದ್ದೇಶಕ್ಕಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಿ ಇಲಾಖೆಯು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಶಿಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಸುಸ್ಥಿರ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು ಮುಖ್ಯ ಭಾಷಣ ಮಾಡಿದ ಬೆಂಗಳೂರಿನ ಬಚ್ಚನ್ ಬಚಾವೂ ಆಂದೋಲನದ ರಾಜ್ಯ ಸಂಯೋಜಕರಾದ ಬಿನು ವರ್ಗೀಸ್ ಅವರು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಜೇಷನ್ ವರದಿ ಪ್ರಕಾರ ವಿಶ್ವದಲ್ಲಿ 160 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದು, ಈ ಪೈಕಿ 60 ಮಿಲಿಯನ್‍ಗೂ ಅಧಿಕ ಹೆಣ್ಣು ಮಕ್ಕಳಿದ್ದಾರೆ. ಬಾಲ ಕಾರ್ಮಿಕ ಪದ್ದತಿಯಿಂದ ವಿಶ್ವವನ್ನು ಮುಕ್ತಗೊಳಿಸಲು ವಿವಿಧ ಇಲಾಖೆಗಳ ಸಹಕಾರ ಪ್ರಮುಖವಾಗಿದೆ. ಪ್ರತಿಯೊಬ್ಬ ಮಕ್ಕಳಿಗೂ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹಕ್ಕು ಹಾಗೂ ಭಾಗವಹಿಸುವ ಹಕ್ಕು ಇದೆ ಎಂದರು.   ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಈಶ್ವರ್ ಅವರು ಮಾತನಾಡಿ ಮಕ್ಕಳು ಆಡುವ ವಯಸ್ಸಿನಲ್ಲಿ ದುಡಿಮೆಗೆ ದೂಡಬಾರದು. 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಪ್ರತಿ ಮಕ್ಕಳಿಗೂ, ನಾಗರಿಕರಿಗೂ ಬದುಕುವ ಹಕ್ಕಿದೆ. ಮಕ್ಕಳಿಂದ ದುಡಿಸಿಕೊಳ್ಳುವ ಮಾಲೀಕರು, ಪೋಷಕರು ಶಿಕ್ಷೆಗೆ ಮತ್ತು ದಂಡಕ್ಕೆ ಗುರಿಯಾಗಲಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಸತ್ಪ್ರಜೆಗಳಾಗಿ ರೂಪಿಸಬೇಕು ಎಂದು ತಿಳಿಸಿದರು...                     ಆರಂಭ್ ಸುದ್ದಿ ಕನ್ನಡ....


Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments