ಆರಂಭ್ ಸುದ್ದಿ ಕನ್ನಡ

ಉತ್ತಮ ನಾಗರಿಕರಾಗಲು ಕಾನೂನು ಅರಿವು ಅಗತ್ಯ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಅಭಿಮತ


ಚಾಮರಾಜನಗರ,20/06/25ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕಾನೂನು ಅರಿವು ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಈಶ್ವರ್ ಅವರು ತಿಳಿಸಿದರು. 

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ “ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ರಾಜ್ಯಮಟ್ಟದ ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ದೇಶದ ಎಲ್ಲಾ ಕಾನೂನುಗಳಿಗೂ ಮೂಲಧಾರವಾಗಿದೆ. ಸಂವಿಧಾನದಲ್ಲಿ ನಾಗರಿಕ ಹಕ್ಕುಗಳಿವೆ, ಹಾಗೆಯೇ ಕರ್ತವ್ಯಗಳೂ ಇವೆ. ಕಾನೂನಿನಡಿ ಎಲ್ಲರೂ ಸಮಾನರು. ಪ್ರತಿಯೊಬ್ಬರು ಕಾನೂನಿನ ಅರಿವು ಪಡೆದು ಅದನ್ನು ಗೌರವಿಸಬೇಕು. ಮೂಲಭೂತ ಹಕ್ಕುಗಳನ್ನು ಅರಿತು ಕರ್ತವ್ಯಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಬೇಕು ಎಂದರು.

ಕಾನೂನು ಸಮುದ್ರವಿದ್ದಂತೆ. ಅದರ ಸಂಪೂರ್ಣ ಅರಿವು ಪಡೆಯದಿದ್ದರೂ ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಅಗತ್ಯವೋ ಅಷ್ಟೂ ಕಾನೂನಿನ ಜ್ಞಾನವಿದ್ದರೆ ಸಮಾಜದ ಉತ್ತಮ ಪ್ರಜೆಯಾಗಿ ಜೀವಿಸಬಹುದು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಸಂಸ್ಕಾರವಂತರಾಗಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯಬೇಕು. ಭಾರತದ ಪ್ರಜೆಗಳಾದ ನಾವೆಲ್ಲರೂ ಈ ದೇಶದ ಕಾನೂನನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಅವರು ಹೇಳಿದರು. 

ಚಾಮರಾಜನಗರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವೈವಿಧ್ಯಮಯ ಸಂಸ್ಕøತಿಯಿಂದ ಕೂಡಿರುವ ಭಾರತದ ಭವಿಷ್ಯದ ಯುವ ಪೀಳಿಗೆಗೆ ಕಾನೂನಿನ ಅರಿವು ಅಷ್ಟೆ ಮುಖ್ಯವಾಗಿದೆ. ದೇಶ ಸ್ವತಂತ್ರಗೊಂಡು 75 ವರ್ಷಗಳೇ ಆಗಿದ್ದರೂ ಕಾನೂನು ಅರಿವು ಬಗ್ಗೆಯೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ಆಗಾಗ್ಗೆ ನಡೆಯುತ್ತಲೇ ಇವೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ಅರಿವು ಎಲ್ಲರಿಗೂ ಅವಶ್ಯವಾಗಿದೆ ಎಂದರು. 

 ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ವಿದ್ಯಾರ್ಥಿಗಳಾದ ಸುಲೋಚನಾ ಹಾಗೂ ಪ್ರಧಾನಮಂತ್ರಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೊಂಡರಬಾಳು ಜವಾಹರ್ ನವೋದಯ ಶಾಲೆಯ ಸಿಂಚನಾ ಅವರು ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಆರ್. ಲೋಕನಾಥ್ (ಆಡಳಿತ), ಪರಿಕ್ಷಾಂಗ ಕುಲಸಚಿವರಾದ ಡಾ ಜಿ.ವಿ. ವೆಂಕಟರಮಣ, ನಗರದ ಬಿ.ಎಸ್.ವಿ ಪ್ರತಿಷ್ಠಾನ ಅಧ್ಯಕ್ಷರಾದ ಬಿ.ವಿ. ವೆಂಕಟನಾಗಪ್ಪ ಶೆಟ್ಟಿ, ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷರಾದ ಜಿ. ಬಂಗಾರು, ಕಾಲೇಜು ಉಪನ್ಯಾಸಕರು, ಇತರರು ಕಾರ್ಯಕ್ರಮದಲ್ಲಿ ಇದ್ದರು.

ವರದಿ...ಜಹೀರ್ ಅಹ್ಮದ್.

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments