ಕರ್ನಾಟಕ ಪಬ್ಲಿಕ್ ಶಾಲೆ, ಬೆಂಗಳೂರು ಪಬ್ಲಿಕ್ ಶಾಲೆ ಹಾಗೂ ಪಿ.ಎಂ. ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳ ದಾಖಲಾತಿ ಮಿತಿ ಹೆಚ್ಚಳ!!!"
ಬೆಂಗಳೂರು 20/06/25.ಆರಂಭ್ ಸುದ್ದಿ ಕನ್ನಡರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್), ಬೆಂಗಳೂರು ಪಬ್ಲಿಕ್ ಶಾಲೆಗಳು (ಬಿಪಿಎಸ್) ಮತ್ತು ಪಿ.ಎಂ. ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ದಾಖಲಾತಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2025ರ ಜೂನ್ 19ರಂದು ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ವರ್ಷ 2025-26ರಿಂದ ಜಾರಿಗೆ ಬರುವಂತೆ, ಪೂರ್ವ ಪ್ರಾಥಮಿಕ ವಿಭಾಗದಲ್ಲಿ (ಎಲ್‌ಕೆಜಿ ಮತ್ತು ಯುಕೆಜಿ) ಪ್ರತಿ ತರಗತಿಗೆ ಗರಿಷ್ಠ 40 ಮಕ್ಕಳು, ಪ್ರಾಥಮಿಕ ಶಾಲೆಗಳಲ್ಲಿ (1 ರಿಂದ 7ನೇ ತರಗತಿ) ಗರಿಷ್ಠ 50 ಹಾಗೂ ಪ್ರೌಢ ಶಾಲೆಗಳಲ್ಲಿ (8 ರಿಂದ 10ನೇ ತರಗತಿ) ಗರಿಷ್ಠ 50 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅನುಮತಿಸಲಾಗಿದೆ. ಈ ಮೊದಲು, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಿಗೆ ಗರಿಷ್ಠ ದಾಖಲಾತಿ ಮಿತಿಯನ್ನು 30 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿತ್ತು.
ಶಿಕ್ಷಣ ಇಲಾಖೆ ನೀಡಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಸ್ತುತ ಕೆಪಿಎಸ್‌ಗಳಲ್ಲಿ ದ್ವಿ-ಭಾಷಾ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದ್ದು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ), ಪೋಷಕರು ಹಾಗೂ ಜನಪ್ರತಿನಿಧಿಗಳಿಂದ ದಾಖಲಾತಿ ಮಿತಿ ಹೆಚ್ಚಿಸುವಂತೆ ನಿರಂತರ ಬೇಡಿಕೆ ಇತ್ತು.
ರಾಜ್ಯದಲ್ಲಿ 2017-18ನೇ ಸಾಲಿನಿಂದ ಹಂತ ಹಂತವಾಗಿ 308 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಹಾಗೂ ಕನ್ನಡ/ಇತರ ಮಾಧ್ಯಮದ ತರಗತಿಗಳೊಂದಿಗೆ ಒಂದನೇ ತರಗತಿಯಿಂದ ದ್ವಿ-ಭಾಷಾ ಮಾಧ್ಯಮ ತರಗತಿಗಳನ್ನು ಸಹ ಪ್ರಾರಂಭಿಸಲಾಗಿದೆ. ಕೇಂದ್ರಿಯ ವಿದ್ಯಾಲಯ ಮತ್ತು ನವೋದಯ ಶಾಲೆಗಳು ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡು ಯಶಸ್ಸು ಸಾಧಿಸಿರುವ ಕುರಿತು ಉಲ್ಲೇಖಿಸಿರುವ ರಾಜ್ಯ ಸರ್ಕಾರ, ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಂಡು ಹೆಚ್ಚಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ:
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದ ಮಿತಿಯು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಎಲ್ಲ ಶಾಲೆಗಳಲ್ಲಿ ಜಾರಿಗೆ ಬರಲಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಸುತ್ತೋಲೆ ಹೊರಡಿಸಿ, ನಿಯಮಗಳಂತೆ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು. ಪೂರ್ವ ಪ್ರಾಥಮಿಕ ವಿಭಾಗದ ಪ್ರತಿ ತರಗತಿಯ ಶಿಕ್ಷಕ/ಶಿಕ್ಷಕಿಯ ಜತೆ ಒಬ್ಬ ಆಯಾ ಕಡ್ಡಾಯವಾಗಿ ಇರಬೇಕು. ಶಾಲಾ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳು, ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ದಾಖಲಾತಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಬೇಕು ಎಂದು ಷರತ್ತುಗಳನ್ನು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.......
Post a Comment