ಆರಂಭ ಸುದ್ದಿ ಕನ್ನಡ

ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಯಿರಿ ಪ್ರಭು ಚವ್ಹಾಣ 2025ನಲ್ಲಿ ಟಾಪರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಾಲೆಯ ಮುಖ್ಯಗುರುಗಳಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ್‌ನಲ್ಲಿ ಅದ್ದೂರಿಯಾಗಿ ಸನ್ಮಾನಿಸಿದರು.!!!


ಬೀದರ್ ಜಿಲ್ಲೆ ಔರಾದ(ಬಿ)ನಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಾಲೆಯ ಮುಖ್ಯಗುರುಗಳಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 4ರಂದು ಔರಾದ್‌ನಲ್ಲಿ ಅದ್ದೂರಿಯಾಗಿ ಸನ್ಮಾನಿಸಿದರು.

ಶಾಸಕರ ಜನ್ಮದಿನದ ನಿಮಿತ್ತ ಪ್ರಭು ಎಂಟರ್‌ಪ್ರೈಸೆಸ್ ವತಿಯಿಂದ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಟಾಪರ್‌ಗಳಿಗೆ ನಗದು ಬಹುಮಾನ, ಉಡುಗೊರೆಯ ಜೊತೆಗೆ ಹೂ-ಹಾರಗಳೊಂದಿಗೆ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಮಕ್ಕಳು ವಿದ್ಯಯ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ಗುರು ಹಿರಿಯನ್ನು ಗೌರವಿಸಬೇಕು. ದೇಶಭಕ್ತಿ ಭಾವನೆ ಬೆಳೆಯಬೇಕು. ಆಟ-ಪಾಠ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ರಾಜ್ಯದ ಗಡಿಯಲ್ಲಿರುವ ಔರಾದ(ಬಿ) ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಿರಂತರ ಪ್ರಯತ್ನಿಸುತ್ತಿದ್ದು, ವಿದ್ಯಾರ್ಥಿಗಳ ಮನೋಬಲ ವೃದ್ಧಿಸಿ ಸರಿಯಾಗಿ ಅಭ್ಯಾಸ ಮಾಡುವಂತೆ ಪ್ರೇರೇಪಿಸಲು ಫಲಿತಾಂಶ ಸುಧಾರಿಸಲು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಾ ಬರುತ್ತಿದ್ದೇನೆ. ಇದನ್ನು ಕೊನೆವರೆಗೂ ಮುಂದುವರೆಸುತ್ತೇನೆ ಎಂದು ತಿಳಿಸಿದರು.

ಗ್ರಾಮ ಸಂಚಾರ ನಡೆಸಿ ಎಲ್ಲ ಕಡೆಗಳಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಅಧಿಕಾರಿಗಳು ಮತ್ತು ಶಿಕ್ಷಕರ ಜೊತೆಗೆ ಪದೇ ಪದೇ ಸಭೆಗಳನ್ನು ನಡೆಸಿ ಶಿಕ್ಷಣದ ಅಭಿವೃದ್ಧಿಗೆ ಯೋಜನಾಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಇದೆಲ್ಲದರ ಪ್ರತಿಫಲ ಕಾಣಿಸುತ್ತಿದೆ. ಹಿಂದೆ ಕೇವಲ ಶೇ.45ರಷ್ಟಿದ್ದ ಫಲಿತಾಂಶ ಸಾಕಷ್ಟು ಸುಧಾರಿಸಿದೆ ಎಂದು ತಿಳಿಸಿದರು.

ಪೋಷಕರು ಬಹಳಷ್ಟು ಕಷ್ಟಪಟ್ಟು ತಮ್ಮ ಮಕ್ಕಳಿಗೆ ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳು ದೊಡ್ಡ ಗುರಿಯನ್ನಿಟ್ಟುಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ವೈದ್ಯ, ಇಂಜಿನೀಯರ್, ಐಎಎಸ್, ಐಪಿಎಸ್‌ನಂತಹ ಹುದ್ದೆಗಳನ್ನು ಗಿಟ್ಟಿಸಿಕೊಂಡು ಔರಾದ್‌ನ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕಾಗಿ ಶಾಸಕರಾದ ಪ್ರಭು ಚವ್ಹಾಣ ಮಾಡುತ್ತಿರುವ ಸೇವೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ರಾಜಕೀಯದಲ್ಲಿದ್ದರೂ ಯಾವುದೇ ದುಷ್ಚಟಗಳಿಲ್ಲದೇ ರೂಢಿಸಿಕೊಂಡಿರುವ ಸರಳ ಜೀವನಶೈಲಿ ಧಾರ್ಮಿಕ ಗುರುಗಳನ್ನು ಹೋಲುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ. ನಮೋಶಿ ಅವರು ಮಾತನಾಡಿ, ಔರಾದ(ಬಿ) ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿಯ ಕುರಿತಂತೆ ಅವರ ಚಿಂತನೆಗಳು ಉದ್ದಾತವಾಗಿವೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಬಾಲಾಜಿ ಅಮರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಔರಾದ್‌ನಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಇಟ್ಟಿರುವ ಅವರ ಪ್ರೀತಿ ಅನನ್ಯ ಎಂದರು.


Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments