ಔರಾದ್ ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಮಳೆಯಿಂದ ಉಂಟಾದ ಹಾನಿಯನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪರಿಶೀಲಿಸಿದರು!!!!
ಬೀದರ್ ಅಗಸ್ಟ್ 19-08-2025 ಆರಂಭ ಸುದ್ದಿ ಕನ್ನಡ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ವಿವಿಧೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಇಂದು ಭೇಟಿ ನೀಡಿ ಮಳೆ ಹಾನಿ ಸ್ಥಿತಿಗತಿ ವೀಕ್ಷಿಸಿದರು.
ಔರಾದ್ ತಾಲ್ಲೂಕಿನ ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿ ವಿವಿಧೆಡೆ ಸಂಪರ್ಕ ಸೇತುವೆಗೆ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.
ಬೋಂತಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಕೆರೆಯೊಂದು ಒಡೆದು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ಸಂಪರ್ಕ ಸೇತುವೆ ಕುಸಿದು ಬೃಹತ್ ಗುಂಡಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಕಡೆ ಓಡಾಡದಂತೆ ಎಚ್ಚರಿಕೆ ವಹಿಸುವಂತೆ ಡಂಗೂರ ಸಾರುವಂತೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಔರಾದ್ ತಹಸೀಲ್ದಾರ ಮಹೇಶ ಪಾಟೀಲ ಅವರಿಗೆ ತಿಳಿಸಿದರು.
ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ಸಣ್ಣ ನೀರಾವರಿ ಕೆರೆ ಒಡೆದು ನೂರಾರು ಎಕರೆ ಬೆಳೆ ಪ್ರದೇಶಗಳಿಗೆ ನೀರು ನುಗ್ಗಿದೆ. ಬಾವಲಗಾಂವ ಗ್ರಾಮಸ್ಥರಿಗೆ ತಕ್ಷಣವೇ ಸ್ಥಳೀಯ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ನಿರಂತರ ಮಳೆಯಿರುವ ಕಾರಣ ಗ್ರಾಮಸ್ಥರು ಹಾಗೂ ಜನ ಜಾನುವಾರುಗಳನ್ನು ನೀರಿನ ಮೂಲಗಳ ಹತ್ತಿರ ಬಿಡದಂತೆ ಎಚ್ಚರ ವಹಿಸುವಂತೆಯೂ ಸೂಚಿಸಿದರು.
ಆಗಸ್ಟ್.17 ರಂದು ಒಂದೇ ದಿನ 300 ಮೀ.ಮಿ. ಮಳೆಯಾಗಿದ್ದು, ನಾಲ್ಕು ಸಂಪರ್ಕ ಸೇತುವೆ ಭಾಗಶ ಹಾನಿಯಾಗಿವೆ. ಅಂದಾಜು 500 ಎಕರೆ ಬೆಳೆ ಹಾನಿಯಾಗಿದ್ದು ಮಳೆ ನಿಂತ ಮೇಲೆ ಸಮೀಕ್ಷೆ ಕೈಗೊಳ್ಳಲಾಗುವುದು. ಸಧ್ಯಕ್ಕೆ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿರುವುದಿಲ್ಲ ಹಾಗೂ ಮನೆಗಳಿಗೂ ಯಾವುದೇ ರೀತಿಯ ಹಾನಿಯಾಗಿರುವುದಿಲ್ಲವೆಂದು ಔರಾದ್ ತಹಸೀಲ್ದಾರ ಮಹೇಶ ಪಾಟೀಲ ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳು ಕಮಲನಗರ ತಾಲ್ಲೂಕಿನ ನಂದಿ ಬಿಜಲಗಾಂವ ಗ್ರಾಮದಲ್ಲಿ ಹಾನಿಗೊಳಗಾದ ಸೇತುವೆ, ಬೆಳೆ ಹಾನಿ ವೀಕ್ಷಿಸಿದರು. ಹಲವಾರು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ ಗ್ರಾಮದ ಕೆಲ ಮನೆಗಳಿಗೂ ಭಾಗಶಃ ಹಾನಿಯಾಗಿದ್ದು ಸಮೀಕ್ಷೆ ನಡೆಸಿ ತುರ್ತು ಪರಿಹಾರ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಸಹಾಯಕ ಆಯುಕ್ತರಾದ ಮಹ್ಮದ ಶಕೀಲ, ತಾಲ್ಲೂಕ ಪಂಚಾಯತ ಇಓ ಕಿರಣ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.www.arambhsuddikannada.com

Post a Comment