ಆರಂಭ ಸುದ್ದಿ ಕನ್ನಡ

ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

WWW.ARAMBHSUDDIKANNADA.COM

ನವದೆಹಲಿ ಆರಂಭ ಸುದ್ದಿ ಕನ್ನಡ 21-08-2025 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಹಾಗೂ ದಲಿತ ಸಿಎಂ ಕೂಗು ತಪ್ಪಿಸಲು ಬಲಾಡ್ಯ ಎಸ್ಸಿ ಸಮುದಾಯಗಳ ಒತ್ತಡಕ್ಕೆ ಮಣಿದು ನ್ಯಾ. ನಾಗಮೋಹನ ದಾಸ ವರದಿ ಹಾಗೂ ಸುಪ್ರೀಂ ಕೋರ್ಟ್ ಆದೇಶ ತಿರಸ್ಕಾರ ಮಾಡಿ ತಾಂತ್ರಿಕ ಕಾರಣದ ನೆಪ ಒಡ್ಡಿ ಅವಕಾಶ ವಂಚಿತ ಎಸ್ಸಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಸಂಖ್ಯೆ ಆಧಾರದಲ್ಲಿ ಕಾಲಕಾಲಕ್ಕೆ ಮೀಸಲಾತಿಯನ್ನು ಪರಿಷ್ಕರಣೆ ಮಾಡುವಂತೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಕೇವಲ ಆರು ಜಾತಿಯಿಂದ ಪ್ರಾರಂಭವಾದಂತಹ ಎಸ್ಸಿ ಪಟ್ಟಿ ಕರ್ನಾಟಕದಲ್ಲಿ ಈಗ 101 ಜಾತಿಗಳು ಸೇರಿವೆ ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ಸೇರಿಸಿಕೊಂಡು ಹೋದರು. ಆದರೆ, ಅದಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವ ಪ್ರಯತ್ನ ಮಾಡಲಿಲ್ಲ. ಇದು ಅವರು ಮಾಡಿರುವ ದೊಡ್ಡ ದ್ರೋಹ. ಮೂಲಭೂತವಾಗಿ ಹೊಸ ಜಾತಿ ಸೇರಿಸಿದಾಗ ಮೀಸಲಾತಿ ಹೆಚ್ಚಿಸಿದ್ದರೆ ಅವರಿಗೆ ನ್ಯಾಯ ಸಿಗುತ್ತಿತ್ತು. ಕೇವಲ ರಾಜಕೀಯ ಕಾರಣಕ್ಕೆ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿದ್ದರು ಎಂದು ದೂರಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಾನು ಸಿಎಂ ಆಗಿದ್ದಾಗ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ನ್ಯಾ. ನಾಗಮೋಹನ ದಾಸ್ ಕಮಿಟಿ ವರದಿಯಂತೆ ಎಸ್ಸಿ ಸಮುದಾಯಕ್ಕೆ ಶೇ 15 ರಿಂದ ಶೇ 17, ಎಸ್ಪಿ ಸಮುದಾಯಕ್ಕೆ ಶೇ 3 ರಿಂದ ಶೇ 7 ರಷ್ಟು ಹೆಚ್ಚಳ ಮಾಡಿದ್ದರಿಂದ ಸಿದ್ದರಾಮಯ್ಯ ಅವರಿಗೆ ಒಳ ಮೀಸಲಾತಿ ಕೊಡಲು ಸಾಧ್ಯವಾಗಿದೆ. ಇದನ್ನು ಎಸ್ಸಿ ಸಮುದಾಯಗಳು ಹಾಗೂ ಸಿಎಂ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು. ಅವರು ಹಿಂದೆ ಸಿಎಂ ಆಗಿದ್ದಾಗಲೂ ಒಳ ಮೀಸಲಾತಿ ಜಾರಿಗೆ ಒತ್ತಡ ಇತ್ತು ಆಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನೆನೆಗುದಿಗೆ ಬಿದ್ದಿರುವಂತ ಒಳ ಮೀಸಲಾತಿ ಪ್ರಕರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್‌ನಲಿ ಅಫಿಡವಿಟ್ ಸಲಿಸುವ ಮೂಲಕ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಕೊಡಿಸಿತು. ಇದರ ಮೂಲ ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಹಾಗೂ ನಾವು ಮೀಸಲಾತಿ ಹೆಚ್ಚಳ ಮಾಡಿರುವುದು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಎಸ್ಸಿ ಎಸ್ಟಿ ಸಮುದಾಯದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

ರಾಜ್ಯ ಸರ್ಕಾರ ನ್ಯಾ. ನಾಗಮೋಹನ ದಾಸ ಕಮಿಟಿ ಸುಪೀಂ ಕೋರ್ಟ್ ಆದೇಶದಂತೆ ಜಾತಿ ವರ್ಗೀಣಕರಣ ಮಾಡಿರುವ ಆದೇಶವನ್ನು ಬದಿಗೆ ಒತ್ತಿರುವುದು ನೀವು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಅದನ್ನು ಇಟ್ಟುಕೊಂಡು ಯಾರಾದರೂ ಕೋರ್ಟ್ ಮೊರೆ ಹೋದರೆ ಮತ್ತೆ ಆ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ನ್ಯಾ. ನಾಗಮೋಹನ ದಾಸ್ ವರದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನ್ಯಾ. ನಾಗಮೋಹನ ದಾಸ್ ವರದಿಯಲ್ಲಿ ಕೇವಲ ನಾಲ್ಕೈದು ಜಾತಿಗಳು ಎಲ್ಲಾ ಸವಲತ್ತು ತೆಗೆದುಕೊಂಡಿವೆ ಅಂತ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಯಾವ ಸಮುದಾಯಗಳಿಗೆ ಸವಲತ್ತು ಸಿಕ್ಕಿಲ್ಲ ಅವರನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿಯಿಂದ ಸ್ವೀಪ‌ರ್, ಆದಿ ಕರ್ನಾಟಕ, ಆದಿ ದ್ರಾವಿಡ, ಅಲೆಮಾರಿ ಸಮುದಾಯಗಳಿಗೆ ಒಂದೂ ಪರ್ಸೆಂಟೂ ಮೀಸಲಾತಿ ಸಿಗುವುದಿಲ್ಲ. ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯ ಮೈಸೂರು ಭಾಗದಲ್ಲಿಯೇ ಹೆಚ್ಚಾಗಿದ್ದಾರೆ. ಅವರು ಹೆಚ್ಚು ತುಳಿತಕ್ಕೊಳಗಾದ ಸಮುದಾಯ ಅವರಿಗೆ ಸಿಎಂ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಉಳಿಸಿಕೊಳ್ಳಲು ಬಲಾಡ್ಯ ಎಸ್ಪಿ ಜಾತಿಗಳ ಒತ್ತಡಕ್ಕೆ ಮಣಿದು ನ್ಯಾ. ನಾಗಮೋಹನ ದಾಸ ವರದಿ ಹಾಗೂ ಸುಪ್ರೀಂ ಕೋರ್ಟ್ ಆದೇಶ ತಿರಸ್ಕಾರ ಮಾಡಿ ಮೂರು ಗುಂಪು ಮಾಡಿ ತಾಂತ್ರಿಕ ಕಾರಣದ ನೆಪ ಒಡ್ಡಿ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ಹೇಳಿದಂತೆ ನಾಗಮೋಹನ ದಾಸ್ ವರದಿ ವರ್ಗೀಕರಣ ಮಾಡಿದೆ. ರಾಜಕೀಯವಾಗಿ ಉಳಿಯಲು ಶೇ 2 ರಷ್ಟು ಪ್ರಬಲ ಸಮುದಾಯಗಳಿಗೆ ಹಂಚಿಕೆ ಮಾಡದಿದ್ದರೆ ನೀವು ಜಾಗಾ ಖಾಲಿ ಮಾಡಿ ಅಂತ ಬಲಾಢ್ಯ ಎಸ್ಸಿ ಸಮುದಾಯದವರು ಒತ್ತಡ ಹೇರುತ್ತಿದ್ದರು. ಹೀಗಾಗಿ ದಲಿತ ಸಿಎಂ ಕೂಗು ತಪ್ಪಿಸಲು ತಳ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಇದ್ಯಾವ ಸಾಮಾಜಿಕ ನ್ಯಾಯ ಎಂದು ಪ್ರಶ್ನಿಸಿದರು.

*ನಮ್ಮ ಕಾನೂನು ಜಾರಿಯಲ್ಲಿದೆ*

ಮುಖ್ಯಮಂತ್ರಿ ಗಳು ಕೇಂದ್ರ ಸರ್ಕಾರ ಮಾಡುವ ಜನಗಣತಿ ಸಂದರ್ಭದಲ್ಲಿ ಸರಿಪಡಿಸುವ ಭರವಸೆ ನಿಡಿದ್ದಾರೆ. ನಾನು ಮಾಡಿರುವ ಒಳ ಮೀಸಲಾತಿ ಆದೇಶ ಈಗಾಗಲೇ ಜಾರಿಯಲ್ಲಿದೆ. ಅದರ ಆಧಾರದಲ್ಲಿ ನೂರಾರು ಜನ ಎಸ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಎಂಜನೀಯರಿಂಗ್ ಹಾಗೂ ಮೆಡಿಕಲ್ ಸೀಟುಗಳು ಸಿಕ್ಕಿವೆ. ನಾನು ಮಾಡಿರುವುದು ಕಾನೂನು ವಿಧಾನ ಮಂಡಲದಲ್ಲಿ ಒಪ್ಪಿಗೆ ಪಡೆದು ಜಾರಿ ಮಾಡಿದ್ದೇವು. ಸಿದ್ದರಾಮಯ್ಯ ಅವರು ಸಂವಿಧಾನ ತಿದ್ದುಪಡಿ ಬೇಕು ಎಂದು ಹೇಳಿದ್ದರು. ನಾವು ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ ಎಂದು ಹೇಳಿದ್ದೇವು. ನಮ್ಮ ಸರ್ಕಾರದ ನಿಲುವು ಇವರು ಒಪಿಕೊಂಡಿದ್ದರು. ಆದರೆ, ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇವರ ಸರ್ಕಾರ ಬಂದ ಮೇಲೆ ಒಳ ಮೀಸಲಾತಿ ಇಲ್ಲದೇ ನೇಮಕಾತಿ ಮತ್ತು ಬಡ್ತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅದನ್ನು ಈಗ ಜಾರಿ ಮಾಡಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಸ್ವೀಪರ್ ಸಮುದಾಯ ಅತ್ಯಂತ ಕೆಳ ಹಂತದಲ್ಲಿವೆ ಅದು ನ್ಯಾ. ನಾಗಮೋಹನ ದಾಸ್ ವರದಿಯಲ್ಲಿದೆ. ಇಲ್ಲವೇ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿರುವುದನ್ನು ಜಾರಿ ಮಾಡಿ. ರಾಜ್ಯ ಸರ್ಕಾರ ಈಗಲೂ ಸರಿಪಡಿಸಲು ಅವಕಾಶವಿದೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಗೋವಿಂದ ಕಾರಜೋಳ ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಜರಿದ್ದರು.. www.arambhsuddikannada.com

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments